ಮಾರ್ಟಿನಾ, ನವ್ರಾತಿಲೋವಾ
1956. ಪ್ರಸಿದ್ಧ ಟೆನಿಸ್ ಆಟಗಾರ್ತಿ. ಈಕೆ ಚೆಕೊಸ್ಲೋವಾಕಿಯದ ಫ್ರಾಗ್‍ನಲ್ಲಿ 18 ಅಕ್ಟೋಬರ್ 1956ರಂದು ಜನಿಸಿದಳು. ಈಗ ಅಮೆರಿಕೆಯಲ್ಲಿ ನೆಲೆಸಿದ್ದಾಳೆ. 1975ರಲ್ಲಿ ಈಕೆಗೆ ಅಮೆರಿಕನ್ ಪೌರತ್ವ ಲಭಿಸಿತು. ಎಡಗೈ ಆಟಗಾರ್ತಿಯಾದ ಈಕೆ 1973ರಲ್ಲಿ ಫ್ರೆಂಚ್ ಮುಕ್ತ ಟೆನ್ನಿಸ್ ಚಾಂಪಿಯನ್‍ಷಿಪ್‍ನ ಮಹಿಳಾ ವಿಭಾಗದಲ್ಲಿ ಕ್ವಾರ್ಟರ್ ಪೈನಲ್ ತಲಪುವ ಮೂಲಕ ಕ್ರೀಡಾ ಜಗತ್ತಿನಲ್ಲಿ ಗಮನಕ್ಕೆ ಬಂದಳು. 1978ರಲ್ಲಿ ಮೊದಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿಗಳಿಸಿದಳು. 1979ರಲ್ಲಿ ಮತ್ತೆ ಈ ಪ್ರಶಸ್ತಿಯನ್ನು ಗೆದ್ದುಕೊಂಡಳು. ಅನಂತರ 1982-1987ರ ತನಕ ಸತತವಾಗಿ ಆರು ಬಾರಿ ಪ್ರಶಸ್ತಿ ಗೆದ್ದು ವಿಶ್ವ ದಾಖಲೆ ಸ್ಥಾಪಿಸಿದಳು. ಈ ತನಕ ಎಂಟು ವಿಂಬಲ್ಡ್‍ನ್ ಪ್ರಶಸ್ತಿಗಳನ್ನು ಪಡೆದಿರುವ ಮಾರ್ಟಿನಾ ಹಿಂದೆ ಏಳು ಪ್ರಶಸ್ತಿಗಳಿಸಿದ್ದ ಡೊರೋತಿ ಚೇಮಬರ್ಸ್ ಎಂಬಾಕೆಯ ಸಾಧನೆಗಳನ್ನು ಮುರಿದಿದ್ದಾಳೆ. ಅತ್ಯಂತ ಹೆಚ್ಚು ಪ್ರಶಸ್ತಿಗಳಿಸಿರುವ ಆಟಗಾರ್ತಿ ಎಂದರೆ ಹೆಲೆನ್ ವಿಲ್ಲಿಸ್ ಮೂಡಿ. ಮಾರ್ಟಿನಾ ತನ್ನ ಎಂಟನೆಯ ವಿಂಬಲ್ಡ್‍ನ್ ಪ್ರಶಸ್ತಿಯನ್ನು 1987ರಲ್ಲಿ ಪಡೆದಳು. ಅಮೆರಿಕದ (1983, 1984, 1986). ಫ್ರೆಂಚ್ (1982, 1984). ಅಸ್ಟ್ರೇಲಿಯ (1981, 1983, 1985) ಮುಕ್ತ ಟೆನಿಸ್ ಛಾಂಪಿಯನ್ ಪ್ರಶಸ್ತಿ ಪಡೆದಿರುವ ಈಕೆ 1984ರಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗಳಿಸಿದಳು. 1986ರಲ್ಲಿ ಪಶ್ಚಿಮ ಜರ್ಮನಿಯ ಫಿಲ್ಡರ್ ಸ್ಟಾಡ್‍ನಲ್ಲಿ ಪ್ರಶಸ್ತಿಗಳಿಸುವ ಮೂಲಕ ಈಕೆ 1000 ಟೆನಿಸ್ ಪಂದ್ಯಗಳಲ್ಲಿ ಗೆಲವು ಸಾಧಿಸಿ ದಾಖಲೆ ಸ್ಥಾಪಿಸಿದ್ದಾಳೆ. 74 ಪಂದ್ಯಗಳಲ್ಲಿ ಸತತವಾಗಿ ಸಿಂಗಲ್ಸ್ ಪ್ರಶಸ್ತಿ ಗಳಿಸಿರುವುದು ಈಕೆಯ ಇನ್ನೊಂದು ವಿಶ್ವದಾಖಲೆ. ಡಬಲ್ಸ್ ಜೊತೆಗಾರ್ತಿ ಪ್ಯಾಮ್ ಶಿವರ್ ಎಂಬವಳೊಡನೆ ಒಟ್ಟು 109 ಪಂದ್ಯಗಳಲ್ಲಿ ಸತತವಾಗಿ ಜಯಗಳಿಸಿರುವುದು ಇವಳ ಮತ್ತೊಂದು ವಿಶ್ವದಾಖಲೆಯಾಗಿದೆ. ಹೀಗೆ ಟೆನಿಸ್ ಲೋಕದಲ್ಲಿ ಅನಭಿಷಿಕ್ತ ಸಾಮ್ರಾಜ್ಞಿಯೂ ನಂಬರ್ ಒನ್ ಆಟಗಾರ್ತಿಯೂ ಆಗಿರುವ ಈಕೆ ಈತನಕ ಟೆನಿಸ್‍ನಿಂದ ಸಂಪಾದಿಸಿರುವ ಹಣ ಸುಮಾರು 15 ಕೋಟಿಗೂ ಹೆಚ್ಚು (10 ಮಿಲಿಯನ್ ಮಾರ್ಕ್).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ